ಧೂಮಕೇತು   
ಸೌರವ್ಯೂಹದ ಎರಡು ಪ್ರಧಾನ ಬಗೆಯ ಸದಸ್ಯಕಾಯಗಳ ಪೈಕಿ ಒಂದು, ಬಹುತೇಕ ಸಂವೃತ್ತ ಕಕ್ಷೆಯಲ್ಲಿ (ಗ್ರಹಗಳೋಪಾದಿಯಲ್ಲೇ) ಸೂರ್ಯನ ಸುತ್ತ ಸಾಗುವ ಕಾಯ (ಕಾಮೆಟ್). ಇನ್ನೊಂದು ಬಗೆಯ ಸದಸ್ಯಕಾಯಗಳೆಂದರೆ ಗ್ರಹಗಳು ಹಾಗೂ ಕ್ಷುದ್ರಗ್ರಹಗಳು. ಧೂಮಕೇತುವಿನ ಕಕ್ಷೆಯ ಉತ್ಕೇಂದ್ರತೆ ತೀರ ಹೆಚ್ಚು, 1ರ ತನಕವೂ ಇರುವುದುಂಟು. ಗ್ರಹಕಕ್ಷೆಗಳ ಪೈಕಿ ಗರಿಷ್ಠ ಉತ್ಕೇಂದ್ರತೆ ಎಂದರೆ 0.249 (ಪ್ಲೂಟೋಕಕ್ಷೆ). ಗ್ರಹಕಕ್ಷೆಗಳು ಸಾಧಾರಣವಾಗಿ ಕ್ರಾಂತಿವೃತ್ತ ತಲಕ್ಕೆ ಸೀಮಿತವಾಗಿವೆ. ಧೂಮಕೇತು ಕಕ್ಷೆಗಳು ಇಂಥ ಯಾವ ನಮೂನೆಗೂ ಒಳಪಡುವುದಿಲ್ಲ.

ಧೂಮಕೇತುಗಳು ಅಕಾಶದಲ್ಲಿ ಅಗಾಗ್ಗೆ ಪೊರಕೆಗಳಂತೆ ಕಾಣಿಸಿಕೊಂಡು ಪ್ರಾಚೀನ ಕಾಲದಿಂದಲೂ ಮಾನವನ ಕುತೂಹಲವನ್ನು ಕೆರಳಿಸಿ ಸೌರವ್ಯೂಹದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿವೆ. ಗ್ರಹಗಳಂತೆ ಇವು ಕೂಡ ಸೂರ್ಯನ ಗುರುತ್ವಾಕರ್ಷಣೆಗೆ ಒಳಪಟ್ಟಿವೆ, ನಿಜ. ಆದರೆ ಗ್ರಹಗಳಿಗೂ ಇವುಗಳಿಗೂ ನಡುವೆ ಮೂರು ಮುಖ್ಯ ವ್ಯತ್ಯಾಸಗಳಿವೆ: 1 ಗ್ರಹಗಳು ಬಲುಮಟ್ಟಿಗೆ ವೃತ್ತಾಕಾರದ ಕಕ್ಷೆಗಳಲ್ಲಿ ಸೂರ್ಯನ ಸುತ್ತ ಪರಿಭ್ರಮಿಸುತ್ತವೆ. ಧೂಮಕೇತು ಕಕ್ಷೆಗಳಾದರೋ ಸಾಮಾನ್ಯವಾಗಿ ದೀರ್ಘವೃತ್ತ, ಪರವಲಯ ಅಥವಾ ಅತಿಪರವಲಯ ಯಾವುದೇ ಆಗಿರಬಹುದು. 2 ವಿಸ್ತಾರದಲ್ಲಿ (ಅಂದರೆ ರೂಪದಲ್ಲಿ) ಧೂಮಕೇತುಗಳು ಗ್ರಹಗಳಿಗಿಂತ ಅನೇಕ ಪಟ್ಟು ದೊಡ್ಡದಾಗಿ ಕಾಣಿಸಿಕೊಂಡರೂ ವಾಸ್ತವತಃ ಅವು ಬಲು ಹಗುರ. ಲಕ್ಷಾಂತರ ಧೂಮಕೇತುಗಳ ಒಟ್ಟ ತೂಕವೂ ಭೂಮಿಯದಕ್ಕೆ ಸಮವಾಗದು. 3 ಧೂಮಕೇತುಗಳು ನಮಗೆ ಕಾಣಿಸಿಕೊಂಡಾಗ ಅನಿಲಕೋಶದಿಂದ ಆವೃತವಾಗಿರುತ್ತವೆ. ಸೂರ್ಯನ ಸಮೀಪದಲ್ಲಿ ಅನಿಲಕೋಶದಿಂದ ವಸ್ತು ಬಾಲದ ರೂಪದಲ್ಲಿ ಚಿಮ್ಮಲ್ಪಟ್ಟು ಧೂಮಕೇತುವಿಗೆ ವಿಶಿಷ್ಟ ಸೊಬಗನ್ನು ನೀಡುತ್ತದೆ.

	ಅನಿರೀಕ್ಷಿತ ಆಗಮನದಿಂದಲೂ ಬಾಲಗಳೊಡನೆ ಕೂಡಿದ ವಿಚಿತ್ರ ಭಂಗಿಗಳಿಂದಲೂ ಧೂಮಕೇತುಗಳು ಜನಸಾಮಾನ್ಯರನ್ನು ಅನೇಕ ಬಗೆಯ ಭಯ, ವಿಸ್ಮಯ ಮತ್ತು ಮೂಢ ನಂಬಿಕೆಗಳಿಗೆ ಎಡೆ ಮಾಡಿವೆ. ಇವುಗಳ ದರ್ಶನ ಅನಿಷ್ಟ ಸೂಚಕವೆಂಬ ವೃಥಾಭಾವನೆ ಇನ್ನೂ ಅಳಿಸಿಲ್ಲ. ಇವು ನಮ್ಮ ವಾತಾವರಣದಲ್ಲಿ ನಡೆಯುವ ಚಟುವಟಿಕೆಗಳೆಂಬ ತಪ್ಪು ಕಲ್ಪನೆ ಅನೇಕ ಶತಮಾನಗಳ ಕಾಲ  ವಿe್ಞÁನಿಗಳಲ್ಲಿತ್ತು.  ಇಂಥ ನಂಬಿಕೆಗಳೆಲ್ಲ ಈಗ ಅಳಿಸಿಹೋಗಿ, ಧೂಮಕೇತುಗಳ ಬಗ್ಗೆ ಅನೇಕ ನಿಜಾಂಶಗಳು ಬೆಳಕಿಗೆ ಬಂದಿವೆ. ಧೂಮಕೇತುಗಳು ಏತರಿಂದ ಉಂಟಾಗಿವೆ? ಸೌರವ್ಯೂಹದಲ್ಲಿ ಎಷ್ಟಿವೆ? ನಮಗೆ ಗೋಚರವಾಗಿರುವ ಧೂಮಕೇತುಗಳು ತಮ್ಮ ಕಕ್ಷೆಗಳಿಗೆ ಹೇಗೆ ಬಂದುವು ?  ಅವು ಹೊರಗಿನಿಂದ ಸೌರವ್ಯೂಹಕ್ಕೆ ಬಂದವುಗಳೆ ಅಥವಾ ಇಲ್ಲಿಂದಾಚೆಗೆ ಹೋಗುವಂಥವುಗಳೆ? ಈ ಎಲ್ಲ ಪ್ರಶ್ನೆಗಳಿಗೆ ವಿe್ಞÁನಿಗಳು ಉತ್ತರಗಳನ್ನು ಹುಡುಕುತ್ತಿದ್ದಾರೆ. ಅನೇಕ ಧೂಮಕೇತುಗಳು ಸೌರವ್ಯೂಹದ ಉಗಮ ಕಾಲದಿಂದಲೂ ಹೆಚ್ಚಿನ ಮಾರ್ಪಾಡು ಹೊಂದದೆ ಉಳಿದಿವೆ ಎಂಬುದಕ್ಕೆ ಹಲವಾರು ಆಧಾರಗಳಿವೆ. ಇವುಗಳ ಅಧ್ಯಯನದಿಂದ ಸೌರವ್ಯೂಹದ ಹುಟ್ಟು, ಬೆಳೆವಣಿಗೆಗಳ ಬಗ್ಗೆ ತಿಳಿಯಲು ಸಹಾಯವಾಗಬಹುದು. ಸೂರ್ಯನ ಹೊರಮೈ ಭಾಗದಲ್ಲಿ ನಡೆಯುವ ಅನೇಕ ಪ್ರಕ್ಷುಬ್ಧ ಕ್ರಿಯೆಗಳ ಪರಿಣಾಮವಾಗಿ ಅಲ್ಲಿಂದ ನಿರಂತರವಾಗಿ ವಿದ್ಯುತ್ಕಣಗಳು ಮತ್ತು ಅಯಾನುಗಳು ಹೊರಬರುತ್ತಿವೆ. ಈ ಅನಿಲ ಮತ್ತು ಅಯಾನುಗಳ ಧಾರೆಗೆ ಸೌರಮಾರುತ ಎಂದು ಹೆಸರು.  ಇದರ ಸ್ವರೂಪದ ಬಗ್ಗೆ ಧೂಮಕೇತುಗಳ ಬಾಲಗಳು ಅನೇಕ ಮಾಹಿತಿಗಳನ್ನು ಒದಗಿಸಿವೆ. ಈ ಎಲ್ಲ ಕಾರಣಗಳಿಂದ ಧೂಮಕೇತುಗಳು ವಿe್ಞÁನಿಗಳ ಆಸಕ್ತಿಯನ್ನು ಕೆರಳಿಸಿವೆ.

	ಆವಿಷ್ಕಾರ ಮತ್ತು ಹೆಸರು: ಪ್ರತಿವರ್ಷ ಹತ್ತರಿಂದ ಇಪ್ಪತ್ತು ಧೂಮಕೇತುಗಳು ಕಾಣಿಸುತ್ತವೆ.  ಇವುಗಳ ಪೈಕಿ ಹೆಚ್ಚಿನವು ಮಂದಪ್ರಕಾಶವುಳ್ಳವಾಗಿದ್ದು ಕೇವಲ ದುರ್ಬೀನಿಗೆ ಮಾತ್ರ ಗೋಚರಿಸುತ್ತವೆ.  ಬರಿಗಣ್ಣಿಗೇ ಗೋಚರಿಸುವ ಧೂಮಕೇತುಗಳು ಒಂದು ದಶಕಕ್ಕೊಮ್ಮೆ ಬಂದರೆ ಹೆಚ್ಚು. 19ನೇ ಶತಮಾನದ ಐದು ಪ್ರೇಕ್ಷಣೀಯ ಧೂಮಕೇತುಗಳಿಗೆ (1811, 1836, 1843, 1861, 1862) ಸಾಟಿಯಾಗಬಲ್ಲ ಧೂಮಕೇತು ಇಪ್ಪತ್ತನೆಯ ಶತಮಾನದಲ್ಲಿ ಬರಲಿಲ್ಲ. 1910ರಲ್ಲಿ ಅನಿರೀಕ್ಷಿತವಾಗಿ ಬಂದ 1910ಚಿ. ಅದೇ ವರ್ಷದ ಹ್ಯಾಲೀ ಧೂಮಕೇತು ಮತ್ತು 1965ರಲ್ಲಿ ಸೂರ್ಯನನ್ನು ಸವರಿಕೊಂಡು ಹೋದ ಇಕೆಯಾ--ಸೇಕಿ (ಚಿತ್ರ 1) ಇವನ್ನು ಇಪ್ಪತ್ತನೇ ಶತಮಾನದ ಅತ್ಯಾಕರ್ಷಕ 
ಧೂಮಕೇತುಗಳೆನ್ನಬಹುದು. ಬಹಳಷ್ಟು ಧೂಮಕೇತುಗಳ ಆವಿಷ್ಕಾರ ಅವುಗಳ ಬೇಟೆಯಲ್ಲೇ ನಿರತರಾದ ಹವ್ಯಾಸಿ ವೀಕ್ಷಕರಿಂದ ಆಗಿದೆ. ಕೆಲವೊಮ್ಮೆ ಹಿಂದೆಂದೋ ತೆಗೆದ ನಕ್ಷತ್ರಗಳ ಛಾಯಾಚಿತ್ರಗಳ ಪರಿಶೀಲನೆಯ ವೇಳೆಯಲ್ಲಿ ಒಂದು ಧೂಮಕೇತು ಬಂದು ಹೋಗಿರುವುದು ಪತ್ತೆಯಾಗುವ ಸಂಭವವೂ ಉಂಟು. ಪತ್ತೆಯಾದ ಕೂಡಲೆ ಪತ್ತೆಹಚ್ಚಿದವನ ಹೆಸರು ಧೂಮಕೇತುವಿಗೆ ಬರುವುದು. ಒಟ್ಟಿಗೆ ಹಲವಾರು ಆವಿಷ್ಕರ್ತೃಗಳಿದ್ದರೆ ಮೂರಕ್ಕಿಂತಹೆಚ್ಚು ಹೆಸರುಗಳನ್ನು ಸೇರಿಸುವ ವಾಡಿಕೆಯಿಲ್ಲ. 1973-74ರಲ್ಲಿ ಬಹಳ ಪ್ರಚಾರವನ್ನು ಪಡೆದ ಕೊಹೋತೆಕ್ ಧೂಮಕೇತುವನ್ನು ಶೋಧಿಸಿದವ ಚೆಕೊಸ್ಲೊವಾಕಿಯಾದ ಅದೇ ಹೆಸರಿನ ವಿe್ಞÁನಿ. ಇದಲ್ಲದೆ ಧೂಮಕೇತುವಿನ ಶೋಧನೆ ಆದ ವರ್ಷ ಮತ್ತು ಆ ವರ್ಷದಲ್ಲಿ ಅದು ಎಷ್ಟನೆಯದೆಂದು ಸೂಚಿಸುವ ಒಂದು ಇಂಗ್ಲಿಷ್ ಅಕ್ಷರ (ಚಿ, b, ಛಿ ಇತ್ಯಾದಿ) ಇವು ಕೂಡ ಆ ಧೂಮಕೇತುವಿನ ತಾತ್ಕಾಲಿಕ ಹೆಸರಿನಲ್ಲಿರುತ್ತವೆ, ಉದಾಹರಣೆಗೆ ಕೊಹೋತೆಕ್ ಧೂಮಕೇತು 1973ರಲ್ಲಿ ಪ್ರಕಟವಾದವುಗಳ ಪೈಕಿ ಆರನೆಯದಾದ್ದರಿಂದ ಅದರ ತಾತ್ಕಾಲಿಕ ಹೆಸರು 1973 ಜಿ ಎಂದಿದ್ದಿತು. ಹೀಗೆಯೇ 1975ರಲ್ಲಿ 14ನೆಯ ಧೂಮಕೇತುವನ್ನು ವೆಸ್ಟ್ ಎಂಬ ವಿe್ಞÁನಿ ಮೊದಲು ನೋಡಿದ್ದರಿಂದ ಅದಕ್ಕೆ ವೆಸ್ಟ್ ಧೂಮಕೇತು (ಚಿತ್ರ 2) ಅಥವಾ 1975 ಟಿ ಎಂಬ ಹೆಸರುಗಳಿವೆ, ಆದರೆ ಧೂಮಕೇತುವಿನ ಅಂತಿಮ ನಾಮಕರಣದಲ್ಲಿ ಅದು ಸೂರ್ಯನೀಚ ಬಿಂದುವನ್ನು (ಪೆರಿಹೀಲಿಯನ್) ದಾಟಿದ ವರ್ಷ ಮತ್ತು ಆ ವರ್ಷದಲ್ಲಿ ಸೂರ್ಯನೀಚ ಬಿಂದುವನ್ನು ಮುಟ್ಟಿದ ಧೂಮಕೇತುಗಳ ಪೈಕಿ ಅದರ ಕ್ರಮಾಂಕ (I,  II ಇತ್ಯಾದಿ) ಇರುತ್ತವೆ. ಈ ರೀತಿ ಕೊಹೋತೆಕ್ ಧೂಮಕೇತುವಿನ ಹೆಸರು 1973 ಘಿII.  ನಿಯತಕಾಲಿಕ ಧೂಮಕೇತುವೊಂದಕ್ಕೆ ಸಾಮಾನ್ಯವಾಗಿ ಆ ಧೂಮಕೇತುವಿನಬಗ್ಗೆ ವಿಶೇಷ ಅಧ್ಯಯನ ನಡೆಸಿದ ವಿe್ಞÁನಿಯ ಹೆಸರನ್ನು ಇಡಲಾಗುತ್ತದೆ. ಉದಾಹರಣೆಗೆ, ಹಿಂದಿನ ದಾಖಲೆಗಳನ್ನೆಲ್ಲ ಪರಿಶೀಲಿಸಿ 1531, 1607, 1632ರಲ್ಲಿ ಕಾಣಿಸಿಕೊಂಡ ಧೂಮಕೇತುಗಳು ಒಂದೇ ಧೂಮಕೇತುವಿನ ಬೇರೆ ಬೇರೆ ದರ್ಶನಗಳೆಂದು ಸಾಧಿಸಿ ಅದು ಮತ್ತೆ 1758ರಲ್ಲಿ ಬರುವುದೆಂದು ಭವಿಷ್ಯ ನುಡಿದ ಹ್ಯಾಲಿ ಎಂಬ ಖಗೋಳವಿe್ಞÁನಿಯ ಗೌರವಾರ್ಥವಾಗಿ ಆ ಧೂಮಕೇತುವಿಗೆ ಹ್ಯಾಲಿ ಧೂಮಕೇತು ಎಂದು ಹೆಸರಾಯಿತು.  ಹೀಗೆಯೇ ಅತಿ ಕಡಿಮೆ (3.3 ವರ್ಷ) ಪರಿಭ್ರಮಣಕಾಲವುಳ್ಳ ಎನ್ಕೆ ಧೂಮಕೇತುವಿನ ಕಕ್ಷಾವೈಚಿತ್ರ್ಯವನ್ನು ಎನ್ಕೆ ಹೆಸರಿನ ವಿe್ಞÁನಿ ಸಿದ್ಧಪಡಿಸಿದ್ದ. ಪ್ರತಿಯೊಂದು ಪರಿಭ್ರಮಣೆಯಲ್ಲಿಯೂ ಈ ಧೂಮಕೇತುವಿನ ಅವಧಿ ಒಂದು ಗಂಟೆಯಷ್ಟು ಕಡಿಮೆಯಾಗುತ್ತಿದೆ. ಇದು ಅನೇಕ ಬಗೆಗಳಲ್ಲಿ ಒಂದು ವಿಸ್ಮಯಕಾರಿ ಧೂಮಕೇತುವಾಗಿದೆ.

	ವೈವಿಧ್ಯ: ಈ ತನಕ ಸಾವಿರಕ್ಕೂ ಹೆಚ್ಚು ಧೂಮಕೇತುಗಳನ್ನು ಕಾಣಲಾಗಿದೆ. ಇವುಗಳ ಪೈಕಿ ಸುಮಾರು ಅರ್ಧದಷ್ಟು ಧೂಮಕೇತುಗಳು ಹಿಂದೆ ಕಾಣಿಸಿಕೊಂಡವುಗಳ ಪುನರಾಗಮನಗಳು. ಈ ಪೈಕಿ ಸುಮಾರು 200 ನಿಖರ ಅವಧಿಗಳಲ್ಲಿ ಸೂರ್ಯನ ಸುತ್ತ ದೀರ್ಘವೃತ್ತಕಕ್ಷೆಗಳಲ್ಲಿ ಪರಿಭ್ರಮಿಸುತ್ತವೆ.  ಇವುಗಳಿಗೆ ನಿಯತಕಾಲಿಕಗಳು ಎಂದು ಹೆಸರು. 200 ವರ್ಷಗಳಿಗಿಂತ ಕಡಿಮೆ ಅವಧಿ ಇರುವ ಸುಮಾರು 80 ಧೂಮಕೇತುಗಳನ್ನು ಹ್ರಸ್ವಕಾಲಿಕ ಧೂಮಕೇತುಗಳೆಂದು ಕರೆಯುವುದುಂಟು. ಉಳಿದ ನಿಯತಕಾಲಿಕಗಳು ದೀರ್ಘಕಾಲಿಕಗಳು. ನಿಯತಕಾಲಿಕವಲ್ಲದ ಧೂಮಕೇತುಗಳ ಕಕ್ಷೆಗಳು ಪರವಲಯ ಅಥವಾ ಅತಿಪರವಲಯದ ಆಕೃತಿಯಲ್ಲಿರುತ್ತವೆ.

	ಹ್ರಸ್ವಕಾಲಿಕ ಧೂಮಕೇತುಗಳ ಪೈಕಿ ಹೆಚ್ಚಿನವು ಹಲವಾರು ಬಾರಿ ಕಾಣಿಸಿಕೊಂಡಿವೆ; ಎನ್ಕೆ ಧೂಮಕೇತು ಐವತ್ತಕ್ಕೂ  ಹೆಚ್ಚು ಬಾರಿ ಕಾಣಿಸಿಕೊಂಡಿದೆ.  ಇದನ್ನುಳಿದರೆ ಹೆಚ್ಚು ಬಾರಿ ಗೋಚರವಾಗಿರುವುದೆಂದರೆ ಹ್ಯಾಲೀ ಧೂಮಕೇತು. 76 ವರ್ಷಗಳ ಅವಧಿ ಇರುವ ಇದನ್ನು ಕನಿಷ್ಠ ಪಕ್ಷ  31 ಬಾರಿ ನೋಡಿರುವುದಕ್ಕೆ ದಾಖಲೆ ಉಂಟು. 1910ರಲ್ಲಿ ಇದು ಕಾಣಿಸಿಕೊಂಡಾಗ ಸೂರ್ಯನಿಂದ ಇದರ ಕನಿಷ್ಠ ದೂರ ಸುಮಾರು 10 ಕೋಟಿ ಕಿಮೀ. ಆಗ ಇದನ್ನು ಹಗಲಿನಲ್ಲೇ ಸ್ಪಷ್ಟವಾಗಿ ನೋಡಬಹುದಿತ್ತು.  ಇದು 1956ರಲ್ಲಿ ಮತ್ತೆ ಬಂದುಹೋದಾಗ ಕ್ಷೀಣವಾಗಿತ್ತು.

	ಯಾವುದೇ ಧೂಮಕೇತುವಿನ ಕಕ್ಷೆ ಪರವಲಯ ಅಥವಾ ಅತಿಪರವಲಯವಾಗಿದ್ದಲ್ಲಿ ಅದು ಸೌರವ್ಯೂಹಕ್ಕೆ ಹೊರಗಿನಿಂದ ಬಂದುದು ಅಥವಾ ಅಲ್ಲಿಂದಾಚೆಗೆ ಹೋಗಲಿದೆ ಎಂದಾಗುತ್ತದೆ. ಆದರೆ ಇವು ನಿಜಕ್ಕೂ ಸೌರವ್ಯೂಹದ ಅತಿಥಿಗಳೇ ಎಂಬ ಪ್ರಶ್ನೆಗೆ ಖಚಿತವಾದ ಉತ್ತರವಿಲ್ಲ. ಧೂಮಕೇತುವು ಕಕ್ಷೆಯ ಸ್ವಲ್ಪ ಭಾಗದಲ್ಲಿ ಮಾತ್ರ (ಸೂರ್ಯನಿಗೂ ಭೂಮಿಗೂ ಹತ್ತಿರವಿದ್ದಾಗ) ನಮಗೆ ಕಾಣಿಸಿಕೊಳ್ಳುತ್ತದೆ. ಇಷ್ಟನ್ನು ಮಾತ್ರ ಪರಿಶೀಲಿಸಿ ಅದರ ಕಕ್ಷೆ ಪರವಲಯ ಅಥವಾ ಅತಿದೀರ್ಘವೃತ್ತವೆಂದು ಹೇಳುವುದು ಬಹಳ ಕಷ್ಟ (ಚಿತ್ರ 3). ಅಲ್ಲದೆ ಅತಿಭಾರವಾದ ಗುರು ಮತ್ತ ಶನಿಗ್ರಹಗಳ ಪ್ರಭಾವದಿಂದ ಒಂದು ಧೂಮಕೇತುವಿನ ದೀರ್ಘವೃತ್ತಕಕ್ಷೆ ಬದಲುಗೊಂಡು ಅತಿಪರವಲಯದಂತೆ ಕಾಣಬಹುದು. ಹೀಗಾಗಿ ನಿಜಕ್ಕೂ ಪರವಲಯ ಅಥವಾ ಅತಿಪರವಲಯದ ಕಕ್ಷೆಯಲ್ಲಿ ಒಂದು ಧೂಮಕೇತು ಚಲಿಸುತ್ತಿದೆ ಎಂಬುದಕ್ಕೆ ಖಚಿತವಾದ ಯಾವ ಪುರಾವೆಯೂ ದೊರೆತಿಲ್ಲ. ಈಗಿನ ಮಾಹಿತಿಗಳಲ್ಲಿ ಎಲ್ಲ ಧೂಮಕೇತುಗಳೂ ಸೌರವ್ಯೂಹಕ್ಕೇ ಸೇರಿವೆ ಎನ್ನಬಹುದು.

	ಧೂಮಕೇತು ಕುಟುಂಬಗಳು : ಯಾವುದೇ ಧೂಮಕೇತು ಗುರುಗ್ರಹಕ್ಕೆ (ಇದರ ರಾಶಿ ಭೂಮಿಯದಕ್ಕಿಂತ ಸುಮಾರು 300 ಪಾಲು ಹೆಚ್ಚು) ಸುಮಾರು 300,000 ಕಿಮೀ ಗಳಷ್ಟು ಸಮೀಪ ಬಂದರೆ ಗುರುವಿನ ಗುರುತ್ವಾಕರ್ಷಣೆಯ ಪ್ರಭಾವದಿಂದ ಧೂಮಕೇತುವಿನ ಕಕ್ಷೆ ಬಹಳಷ್ಟು ಬದಲಾಗುವುದು.  ಬದಲಾದ ಕಕ್ಷೆಯ ಸೂರ್ಯೋಚ್ಚ ಬಿಂದು ಗುರುಗ್ರಹದ ಕಕ್ಷೆಯ ಬಳಿ ಇರುತ್ತದೆ. 

ಚಿತ್ರ-3

ಇಂಥ ಧೂಮಕೇತುವಿನ ಅವಧಿ 5---7 ವರ್ಷಗಳಷ್ಟು ಇರುತ್ತದೆ. ಬ್ರೂಕ್ಸ್ 11 ಧೂಮಕೇತು 1886ರಲ್ಲಿ ಗುರುಗ್ರಹಕ್ಕೆ ಬಹಳ ಹತ್ತಿರ (75,000 ಕಿಮೀ) ಬಂದಾಗ ಅದರ ಅವಧಿ 29 ವರ್ಷಗಳಿಂದ ಕೇವಲ 7 ವರ್ಷಗಳಷ್ಟಾಯಿತು. ಈ ರೀತಿ ಗುರುಗ್ರಹದ ಪ್ರಭಾವಕ್ಕೆ ಒಳಗಾಗಿ ಒಂದೇ ಪ್ರಕಾರದ ಕಕ್ಷೆಗಳುಳ್ಳ ಸುಮಾರು 63 ಧೂಮಕೇತುಗಳು ಈ  ವರೆಗೆ ತಿಳಿದಿವೆ. ಇವನ್ನು ಗುರು ಕುಟುಂಬದ ಧೂಮಕೇತುಗಳು ಎನ್ನುವುದುಂಟು. ಇತರ ಗ್ರಹಗಳಿಗೆ ಇಂಥ ಕುಟುಂಬಗಳು ಇರುವುದು ತಿಳಿದಿಲ್ಲ. 1994ರಲ್ಲಿ ಷೂಮೇಕರ್-ಲೆವಿ ಎಂಬ ಧೂಮಕೇತು 21 ತುಂಡುಗಳಾಗಿ ಸಿಡಿದು, ಗುರುಗ್ರಹಕ್ಕೆ ಅಪ್ಪಳಿಸಿತು.

	ಹೆಚ್ಚು ಕಡಿಮೆ ಒಂದೇ ಕಕ್ಷೆಯಲ್ಲಿ ಚಲಿಸುವ ಧೂಮಕೇತುಗಳ ಗುಂಪುಗಳೂ ಇವೆ. ಧೂಮಕೇತು ಸೂರ್ಯನಿಗೆ ಬಹಳ ಹತ್ತಿರ ಬಂದಾಗ ಅದರ ಚಟುವಟಿಕೆಗಳು ತೀವ್ರವಾಗಿ ಅದು ಒಡೆಯಬಹುದು. ಈ ರೀತಿ ಒಡೆದ ಭಾಗಗಳು ಮೂಲಕಕ್ಷೆಗೆ ಹತ್ತಿರದಲ್ಲೇ ಬೇರೆ ಬೇರೆ ಧೂಮಕೇತುಗಳಾಗಿ ಚಲಿಸಲಾರಂಬಿಸುವುದರಿಂದ ಇಂಥ ಗುಂಪುಗಳು ಉಂಟಾಗಿರಬಹುದು. 1846ರಲ್ಲಿ ಬಿಯೆಲಾ ಧೂಮಕೇತು ವೀಕ್ಷಣೆಯಲ್ಲಿದ್ದಾಗಲೆ ಛಿದ್ರವಾದದ್ದನ್ನು ಗಮನಿಸಲಾಯಿತು. ಒಡೆದ ಎರಡು ಭಾಗಗಳೂ 1852ರಲ್ಲಿ ಮರು ಕಾಣಿಸಿಕೊಂಡುವು. ಮತ್ತೆ ಅವು ಕಾಣಿಸಿಕೊಂಡಿಲ್ಲ.

ಆಕೃತಿ ಮತ್ತು ಗಾತ್ರ: ಧೂಮಕೇತುಗಳಲ್ಲಿ ಶಿರ, ಅನಿಲಕೋಶ (ಕೋಮ) ಮತ್ತು ಬಾಲಗಳೆಂಬ ಮೂರು ಅಂಗಗಳಿವೆ. ಇವುಗಳ ಪೈಕಿ ಶಿರವೊಂದೇ ಶಾಶ್ವತ ಅಂಗ. ಧೂಮಕೇತು ಸೂರ್ಯನ ಬಳಿ ಬಂದಾಗ ಶಿರದ ದ್ರವ್ಯ ಕರಗಿ ಅಲ್ಲಿಂದ ಹೊರಹೊರಟ ದೂಳು ಮತ್ತು ಅನಿಲ ಕಣಗಳಿಂದ ಉಂಟಾಗುವ ಚಟುವಟಿಕೆಗಳು. ಸೂರ್ಯನಿಂದ ಬಹಳ ದೂರ ಇದ್ದಾಗ ಧೂಮಕೇತುವಿನಲ್ಲಿ ಕೇವಲ ಶಿರವೊಂದೇ ಇರುವುದು. ಅದು ಸೂರ್ಯನ ಬೆಳಕನ್ನು ಪ್ರತಿಫಲಿಸಿ ಹೊಳೆಯುವುದರಿಂದ ಪ್ರತಿಫಲನದ ಮಟ್ಟದಿಂದ ಅದರ ಗಾತ್ರವನ್ನು ಊಹಿಸಬಹುದು. ಹೀಗೆ ಊಹಿಸಲಾದ ಗಾತ್ರಗಳು ಹಲವು ಕಿಲೊ ಮೀಟರುಗಳಿಂದ ಹಲವು ದಶಕಿಲೊಮೀಟರುಗಳ ವರೆಗಿವೆ. ಸಾಮಾನ್ಯವಾಗಿ ಶಿರ ಅನಿಲಕೋಶದಿಂದ ಆವೃತವಾಗಿದ್ದಾಗಲೇ ನಮಗೆ ಕಾಣಿಸುವುದರಿಂದ ಅದರ ನೇರವೀಕ್ಷಣೆ ಬಲು ಕಷ್ಟ. ಅದು ತುಂಬ ಹಗುರ.  1770ರಲ್ಲಿ ಲೆಕ್ಸೆಲ್ ಧೂಮಕೇತು ಭೂಮಿಗೆ 24 ಲಕ್ಷ ಕಿಮೀಗಳಷ್ಟು ಹತ್ತಿರ ಬಂದಾಗ ಅದರಿಂದ ಭೂಕಕ್ಷೆಯಲ್ಲಿ ಯಾವ ಬದಲಾವಣೆಯೂ ಕಾಣಬರಲಿಲ್ಲ. ಈ ರೀತಿಯ ನಿದರ್ಶನಗಳಿಂದ ಧೂಮಕೇತುವಿನ ತೂಕ ಭೂಮಿಯದರ  10-6 ರಷ್ಟು ಇರಬಹುದೆಂದು ಸಿದ್ಧವಾಗುತ್ತದೆ. ಅನಿಲಕೋಶ ಮತ್ತು ಬಾಲಗಳಲ್ಲಿನ ರಾಶಿ ಶಿರದ್ದಕ್ಕಿಂತ ಅನೇಕಪಟ್ಟು ಕಡಿಮೆ ಉಂಟು.

	ಧೂಮಕೇತುವಿನ ಅಂಗಗಳಲ್ಲೆಲ್ಲ ಅತಿಸುಲಭವಾಗಿ ವೀಕ್ಷಣೆಗೆ ದೊರೆಯುವುದು ಅದರ  ಅನಿಲಕೋಶ. ಅನೇಕ ವೇಳೆ ಇದೊಂದೇ ನಮಗೆ ಗೋಚರವಾಗುವ ಅಂಗವಾಗಬಹುದು. ಸೂರ್ಯನ ಶಾಖದಿಂದ ಶಿರದ ಹೊರಭಾಗ ಬಾಷ್ಟೀಕೃತಗೊಂಡು ಶಿಥಿಲವಾದ ಅನಿಲಕೋಶ ಉಂಟಾಗುವುದು.  ಮೊದಮೊದಲು ಇದು ಸಣ್ಣ ನೀಹಾರಿಕೆಯಂತೆ ಕಂಡುಬಂದು ಸೂರ್ಯನಿಗೆ ಹತ್ತಿರ ಬಂದಂತೆ ಬೆಳೆಯುತ್ತ ಹೋಗುತ್ತದೆ.  ಅನಿಲಕೋಶದ  ವ್ಯಾಪ್ತಿ ಹಲವು ಲಕ್ಷ ಕಿಲೊಮೀಟರುಗಳಿಷ್ಟಿರುವ ಅನೇಕ ಧೂಮಕೇತುಗಳು ಕಾಣಿಸಿವೆ. ಧೂಮಕೇತು ಸೂರ್ಯನಿಂದ ಒಂದೆರಡು ಖಗೋಳಮಾನಗಳಿಗಿಂತ (1.5ಘಿ 108 ಕಿಮೀ) ಕಡಿಮೆ ದೂರದಲ್ಲಿದ್ದಾಗ ಅನಿಲಕೋಶದ ವಸ್ತು ಬಾಲದ ರೂಪದಲ್ಲಿ ಹೊರಚಿಮ್ಮಿ ಅದರ ಗಾತ್ರ ಕುಗ್ಗುತ್ತದೆ.  ಅನಿಲಕೋಶ ಬಹಳ ಶಿಥಿಲವಾಗಿರುವುದು. ಅದರ ಸಾಂದ್ರತೆ ಶಿರದ ಹತ್ತಿರ ಅತಿಹೆಚ್ಚು ಎಂದರೆ ನಮ್ಮ ವಾತಾವರಣದ ಹತ್ತುಸಾವಿರನೆಯ ಒಂದರಷ್ಟು ಇದ್ದು ಶಿರದಿಂದ ದೂರ ಹೋದಂತೆಲ್ಲ ಕಡಿಮೆ ಆಗುತ್ತ ಹೋಗುವುದು [(ಸಾಂದ್ರತೆ) ( (ದೂರ)-2]. ಅನಿಲಕೋಶ ದೂಳು ಮತ್ತು ಅನಿಲಗಳಿಂದ ಕೂಡಿದೆಯೆಂದು ಅದರ ರೋಹಿತದಿಂದ ತಿಳಿದುಬರುತ್ತದೆ.  ದೂಳಿನಲ್ಲಿ ಮೈಕ್ರಾನ್ (10-6 ಮೀಟರು) ಗಾತ್ರದ ಅಥವಾ ಇನ್ನೂ ಚಿಕ್ಕದಾದ ಘನವಸ್ತುಕಣಗಳು ಇವೆ. ಸೂರ್ಯನ ಶಾಖ ಮತ್ತು ಸೌರಮಾರುತಗಳ ಪ್ರಭಾವದಿಂದ ಇವುಗಳಲ್ಲಿ ಅನೇಕ ಬಗೆಯ ಕ್ರಿಯೆಗಳು ಉಂಟಾಗಿ ಅನಿಲಭಾಗ ಮೈದಳೆಯುತ್ತದೆ. ಆದ್ದರಿಂದ ಹಲವಾರು ಬಾರಿ ಸೂರ್ಯನೀಚಸ್ಥಾನವನ್ನು ದಾಟಿರುವ ಧೂಮಕೇತುಗಳ ಅನಿಲಕೋಶಗಳಲ್ಲಿ ದೂಳಿನ ಅಂಶ ಬಲು ಕಡಿಮೆ ಇರುವುದು.

	ಧೂಮಕೇತುವಿನ ಅತ್ಯಾಕರ್ಷಕ ಅಂಗವೆಂದರೆ ಬಾಲ, ಸೌರ ವಿಕಿರಣದ ಒತ್ತಡ ಸೂರ್ಯನಿಂದ  ಒಂದೆರಡು ಖಗೋಳಮಾನಗಳೊಳಗೆ ಇರುವ ಧೂಮಕೇತುವಿನ ಅನಿಲಕೋಶದ ಕಣಗಳನ್ನು ಹೊರತಳ್ಳಿ ಬಾಲವನ್ನು ಉತ್ಪಾದಿಸುತ್ತದೆ. ಸೂರ್ಯನ ಸಮೀಪ ಬಂದಂತೆ ಈ ಒತ್ತಡವೂ ಹೆಚ್ಚಾಗಿ ಬಾಲ ದೊಡ್ಡದಾಗುವುದು. ಸೂರ್ಯನೀಚಸ್ಥಾನವನ್ನು ದಾಟಿದ ಬಳಿಕ ಧೂಮಕೇತು ಸೂರ್ಯನಿಂದ ದೂರ ದೂರ ಹೋಗಲಾರಂಭಿಸುವುದರಿಂದ ಅದರ ಬಾಲ ಚಿಕ್ಕದಾಗುತ್ತ ಬಂದು ಕ್ರಮೇಣ ಅಳಿಸಿಹೋಗುತ್ತದೆ.  ಸೂರ್ಯನ ಕಿರಣಗಳ ಒತ್ತಡದಿಂದ ಬಾಲ ಉಂಟಾಗುವುದರಿಂದ ಅದು ಸದಾ ಸೂರ್ಯನಿಗೆ ವಿಮುಖವಾಗಿರುವುದು.

ಅನಿಲಕೋಶದ ಕಣಗಳ ಮೇಲೆ ಬೆಳಕಿನ ಒತ್ತಡದ ವಿಕರ್ಷಣ ಬಲ ಮತ್ತು ಸೂರ್ಯನ ಗುರುತ್ವಾಕರ್ಷಣ ಬಲ ಎರಡರ ಪ್ರಭಾವಗಳೂ ಒಟ್ಟಿಗೆ ಇರುವುವು. ಒಂದೆರಡು ಖಗೋಳಮಾನಗಳೊಳಗೆ ಇರುವ ಸೂಕ್ಷ್ಮಕಣಗಳ ಮೇಲೆ ವಿಕರ್ಷಣೆಯದು ಬಹಳ ಮಟ್ಟಿಗೆ ಮೇಲುಗೈ ಆದ್ದರಿಂದ ಅನಿಲಕೋಶದ ಕಣಗಳು ಹೊರಚಿಮ್ಮಿ ಬಾಲ ಏರ್ಪಡುತ್ತದೆ. ಬೇರೆ ಬೇರೆ ಗಾತ್ರದ ಕಣಗಳ ಮೇಲೆ ಆಕರ್ಷಣೆ, ವಿಕರ್ಷಣೆಗಳ ಒಟ್ಟು ಪ್ರಭಾವ ಬೇರೆ ಬೇರೆ. ಹೀಗಾಗಿ ಒಮ್ಮೊಮ್ಮೆ ಒಂದು ಧೂಮಕೇತುವಿನಲ್ಲಿ ಅನೇಕ ಬಾಲಗಳು ಕಾಣಿಸುವುದುಂಟು. ಇವುಗಳಲ್ಲಿ ಮುಖ್ಯವಾಗಿ ದೂಳಿನಬಾಲ ಮತ್ತು ಅನಿಲಬಾಲ ಎಂಬ ಎರಡು ಪ್ರಕಾರಗಳಿವೆ. ಈ ಎರಡು ಬಗೆಯ ಬಾಲಗಳನ್ನು ಚಿತ್ರ (4)ರಲ್ಲಿ ತೋರಿಸಿರುವ ಮರ್ಕಾಸ್ ಧೂಮಕೇತುವಿನಲ್ಲಿ ಕಾಣಬಹುದು. 

ಅನಿಲಬಾಲಗಳಲ್ಲಿ ವಿಶೇಷವಾಗಿ ಅನಿಲಗಳು ಮತ್ತು ಅಯಾನುಗಳಿರುತ್ತವೆ. ಇವನ್ನು ಅಯಾನುಬಾಲಗಳೆಂದೂ ಕರೆಯುವುದುಂಟು. ಅನಿಲಬಾಲ ಬಲುಮಟ್ಟಿಗೆ ನೇರವಾಗಿರುವುದರಿಂದ ಅದರ ದ್ರವ್ಯದ ಮೇಲಿನ ವಿಕರ್ಷಣ ಬಲ ಅಕರ್ಷಣೆಗಿಂತ ಬಲು ಪಾಲು ಹೆಚ್ಚಿರುವುದೆಂದು ತಿಳಿದಿದೆ. ಕೆಲವೊಮ್ಮೆ ಅದರಲ್ಲಿ ಸೆಕೆಂಡಿಗೆ 400 ಕಿಮೀ ವೇಗದಲ್ಲಿ ಚಲಿಸುವ ಅಕೃತಿಗಳಿರುತ್ತವೆ. ಇಂಥ ವಿಕರ್ಷಣೆ ಕೇವಲ ಬೆಳಕಿನ ಒತ್ತಡದಿಂದಲೇ ಬರಲು ಸಾಧ್ಯವಿಲ್ಲ. ಸೌರಮಾರುತದ ಅಸ್ತಿತ್ವ ತಿಳಿಯುವ ತನಕ ಈ ತೀವ್ರ ವಿಕರ್ಷಣೆ ಒಂದು ಒಗಟೇ ಅಗಿತ್ತು. ಸೌರಮಾರುತದಲ್ಲಿ ವೇಗದಿಂದ ಚಲಿಸುವ ಅನಿಲ ಮತ್ತು ಅಯಾನುಕಣಗಳಿವೆ. ಇವು ಅನಿಲಕೋಶದ ಚಟುವಟಿಕೆಗಳ ಮೂಲಕ ಉಂಟಾದ ಅಯಾನುಗಳನ್ನು ಮತ್ತು ವಿದ್ಯುತ್ಕಣಗಳನ್ನು ತಮ್ಮೊಡನೆ ಸೆಳೆದುಕೊಂಡು ಹೋಗಿ ಅಯಾನು ಬಾಲವನ್ನು ಉತ್ಪಾದಿಸುವುವು. ಸೌರಮಾರುತದ ಪ್ರಭಾವ ಬೆಳಕಿನ ಒತ್ತಡದ್ದಕ್ಕಿಂತ ಅನೇಕ ಪಟ್ಟು ಹೆಚ್ಚು. ಆದರೆ ಅದು ಸೂರ್ಯನಿಂದ 1 ಖಗೋಳಮಾನಕ್ಕಿಂತ ಕಡಿಮೆ ದೂರಕ್ಕೆ ಮಾತ್ರ ಸೀಮಿತವಾಗಿದೆ. ಈ ಮಿತಿಯಿಂದ ಅಚೆ ಇರುವ ಅನಿಲಬಾಲಗಳು ಬೆಳಕಿನ ಒತ್ತಡದಿಂದಲೇ ತಲೆದೋರುವಂಥವು. 1965ರಲ್ಲಿ ಇಕೆಯಾಸೇಕಿ ಧೂಮಕೇತು ಸೂರ್ಯನನ್ನು ಸವರಿಕೊಂಡೇ ಹೋಯಿತೇನೋ ಎಂಬಷ್ಟು ಸಮೀಪಿಸಿದ್ದರಿಂದ ಅದರಲ್ಲಿ ಯಾವ ಒಳರಚನೆಯೂ ಇಲ್ಲದ ಅಯಾನು ಬಾಲವನ್ನು ಮಾತ್ರ ಕಾಣಬಹುದಾಗಿತ್ತು. (ಚಿತ್ರ 1). ಇದು ಸೌರ ಮಾರುತದಿಂದ ಉಂಟಾದುದು ಎಂದು ಸ್ಪಷ್ಟವಾಗಿದೆ.
ಸೂರ್ಯನ ಸಮೀಪ ಬಂದಗ ಧೂಮಕೇತು ಅತಿ ವೇಗದಲ್ಲಿ ಚಲಿಸುವುದರಿಂದ ಅದರ ಮೇಲೆ ಪಾತವಾಗುವ ಸೂರ್ಯನ ಶಾಖ ಮತ್ತು ಸೌರಮಾರುತಗಳ ಪರಿಮಾಣಗಳಲ್ಲಿ ತೀವ್ರ ಬದಲಾವಣೆಗಳಾಗುತ್ತ್ತಿರುತ್ತವೆ. ಅದ್ದರಿಂದ ಬಾಲಗಳಲ್ಲಿನ ಗಂಟುಗಳು ಮತ್ತಿತರ ಅಕೃತಿಗಳಲ್ಲಿ ಮತ್ತು ಅವುಗಳ ಕಾಂತಿ ಗಾತ್ರಗಳಲ್ಲಿಯೂ ಬಹಳ ಕಡಿಮೆ ಅವಧಿಗಳಲ್ಲಿ (ಕೆಲವೊಮ್ಮೆ ಕೆಲವು ಗಂಟೆಗಳಲ್ಲೇ) ಬದಲಾವಣೆಗಳು ಕಾಣಬರುವುವು. ಈ ಅಂಶ ಚಿತ್ರ (4) ರಲ್ಲಿ ತೋರಿಸಿರುವ ಮರ್ಕಾಸ್ ಧೂಮಕೇತುವಿನ (1957 ಗಿ) ಛಾಯಾಚಿತ್ರಗಳಿಂದ ಸ್ಪಷ್ಟವಾಗುತ್ತದೆ. ಎರಡುದಿವಸಗಳ ಅಂತರದಲ್ಲಿ ಇವನ್ನು ತೆಗೆಯಲಾಗಿತ್ತು.

ಸೌರಮಾರುತ, ಅನಿಲಕೋಶದ ಚಟುವಟಿಕೆಗಳು, ಅ ಚಟುವಟಿಕೆಗಳಿಂದ ವಿಸರ್ಜಿಸಲ್ಪಟ್ಟ ವಸ್ತುವಿಗೂ ಸೌರವಾಯುವಿಗೂ ನಡುವೆ ನಡೆಯುವ ಕ್ರಿಯೆಗಳು-ಇವೆಲ್ಲ ಬಹಳ ಜಟಿಲವಾಗಿದ್ದು ಇನ್ನೂ ಪೂರ್ಣ ಅರ್ಥವಾಗಿಲ್ಲ.

ಸಂಯೋಜನೆ:  ಧೂಮಕೇತುಗಳು ಮುಖ್ಯವಾಗಿ ದೂಳು ಮತ್ತು ಕೆಲವು ಬಗೆಯ ಹಿಮಗಡ್ಡ್ಡೆಗಳನ್ನು ಒಳಗೊಂಡಿವೆಯೆಂದು ಅವುಗಳ ರೋಹಿತಗಳಿಂದ ತಿಳಿದುಬರುತ್ತದೆ. ಅನಿಲಕೋಶ ಮತ್ತು ಬಾಲಗಳಲ್ಲಿ ಸಯನೋಜನ್, ಕಾರ್ಬನ್, ಮೀಥೇನ್, ನೀರು ಮತ್ತು ಹೈಡ್ರೋಜನ್, ಅಕ್ಸಿಜನ್, ನೈಟ್ರೋಜನ್, ಮತ್ತು ಕಾರ್ಬನ್ನಿನ ಕೆಲವು ಸಂಯುಕ್ತಗಳು ಇರುತ್ತವೆ. ಸೂರ್ಯೋಷ್ಣದ ತೀವ್ರತೆ ಹೆಚ್ಚಾದಾಗ ಬಾಲಗಳಲ್ಲಿ ಅಔ+, ಅಓ+, ಓ2+, ಅಊ+, ಔಊ+ ಮುಂತಾದ ಅಯಾನುಗಳು ಕಂಡುಬರುತ್ತದೆ. ಈ ಅನಿಲಗಳ ಮತ್ತು ಅಯಾನುಗಳ ಸ್ವರೂಪ ಹಾಗೂ ಪರಿಮಾಣಗಳು ಎಲ್ಲ ಧೂಮಕೇತುಗಳಲ್ಲೂ ಒಂದೇ ಪ್ರಕಾರ ಇರುವುದಿಲ್ಲ.  ಅಲ್ಲದೆ, ಒಂದೇ ಧೂಮಕೇತು ಸೂರ್ಯನಿಂದ ಬೇರೆ ಬೇರೆ ದೂರಗಳಲ್ಲಿದ್ದಾಗ ಅದರ ಅನಿಲಕೋಶ ಮತ್ತು ಬಾಲಗಳ ರಚನೆ ಬೇರೆ ಬೇರೆ ಇರುವುದು.  ಅದರೆ ಇವೆಲ್ಲ ಸೂರ್ಯೋಷ್ಣದಿಂದ ಬಾಷ್ಪೀಭವಿಸಿ ಶಿರದ ವಸ್ತುಗಳಿಂದಲೇ ಉಂಟಾಗುವುದರಿಂದ ಧೂಮಕೇತುವಿನ ಒಳರಚನೆ ಅದರ ಶಿರದ ಸಂಯೋಜನೆಯನ್ನೇ ಅವಲಂಬಿಸಿದೆ.

ಶಿರದ ರಚನೆಯನ್ನು ನೇರವಾಗಿ ತಿಳಿಯಲು ಈ ವರೆಗೆ ಸಾಧ್ಯವಾಗದ್ದರಿಂದ ಮೇಲೆ ಹೇಳಿದ ಅನೇಕ ಕ್ರಿಯೆಗಳ ಆಧಾರದ ಮೇಲೆ ಧೂಮಕೇತುವಿನ ಪ್ರತಿರೂಪವನ್ನು ರಚಿಸಬೇಕಾಗಿದೆ. ಈ ತೆರನಾದ ಪ್ರತಿರೂಪಗಳಲ್ಲಿ ಈಗ ಪ್ರಚಲಿತವಾಗಿರುವುದನ್ನು ಮೊದಲು ತಿಳಿಸಿದಾತ ಫ್ರೆಡ್ ವ್ಹಿಪಲ್ ಎಂಬ ವಿe್ಞÁನಿ.   ಆತನ ಪ್ರಕಾರ ಶಿರದಲ್ಲಿ ಮುಖ್ಯವಾಗಿ ನೀರು, ಕಾರ್ಬನ್ ಡೈಆಕ್ಸೈಡ್, ಮೀಥೇನ್, ಅಮೊನಿಯ ಮುಂತಾದ ವಸ್ತುಗಳು ಹೆಪ್ಪುಗಟ್ಟಿ ಘನರೂಪದಲ್ಲಿವೆ. ಇವುಗಳ ಹೊರಮೈಗೆ ಕೆಲವೊಮ್ಮೆ ಸಿಲಿಕನ್, ಮೆಗ್ನೀಸಿಯಮ್, ಅಲ್ಯೂಮಿನಿಯಮ್. ಕಬ್ಬಿಣ ಮುಂತಾದ ಧಾತುಗಳು ಮತ್ತು ಅವುಗಳ ಕೆಲವು ಸರಳ ಸಂಯುಕ್ತಗಳು ಕೊಳೆಯಂತೆ ಅಂಟಿಕೊಂಡಿರುತ್ತದೆ. ಈ ಕೊಳಕು ಹಿಮಗಡ್ಡೆಗೆ ಸೂರ್ಯೋಷ್ಣ ಮುಟ್ಟಿದಾಗ ಹೊರಭಾಗ ಬಾಷ್ಪೀಭವಿಸಿ ಶಿರದ ಸುತ್ತ ಅನಿಲದ ಆವರಣವುಂಟಾಗುತ್ತದೆ. ಈ ಅನಿಲಗಳು ಕ್ರಮೇಣ ಹೊರಬಂದು ಅನಿಲಕೋಶವನ್ನು ಉಂಟುಮಾಡುತ್ತವೆ. ಅನಿಲಕೋಶದ ಅನಿಲಗಳ ಸೂರ್ಯನ ಅತಿನೇರಿಳೆ ವಿದ್ಯುತ್ಕಾಂತ ತರಂಗಗಳನ್ನು ಹೀರಿಕೊಂಡು ಮತ್ತೆ ಕೆಲವು ವಿಶಿಷ್ಟ ಅಲೆಯುದ್ದಗಳನ್ನು ವಿಸರ್ಜಿಸುತ್ತವೆ. ವಿಸರ್ಜಿತ ಅಲೆಗಳ ಅಲೆಯುದ್ದ ಹೀರಿಕೊಳ್ಳಲ್ಪಟ್ಟ ಅಲೆಗಳ ಅಲೆಯುದ್ದಕ್ಕಿಂತ ಕಡಿಮೆ. (ಈ ಕ್ರಿಯೆಗೆ ಪ್ರತಿದೀಪ್ತಿ ಎಂದು ಹೆಸರು).  ಈ ವಿಸರ್ಜಿತ ಅಲೆಗಳು ದೃಶ್ಯರೋಹಿತದಲ್ಲಿ ಇರುವುದರಿಂದ ಅನಿಲಕೋಶವನ್ನು ನಾವು ನೋಡಬಹುದು.  ಅನಿಲಕೋಶದ ದೂಳಿನ ಕಣಗಳು ಶಿರದ ಹೊರಮೈಯಿಂದ ತಪ್ಪಿಸಿಕೊಂಡ ಕಣಗಳು.

ಸಾಮಾನ್ಯವಾಗಿ ಧೂಮಕೇತುವಿನ ಶಿರ ಕಾಣಿಸಿಕೊಂಡ ಕೂಡಲೆ ಭೂಮಿ ಸೂರ್ಯ ಮತ್ತು ಅದರ ನಡುವಣ ದೂರಗಳ ಬದಲಿಕೆಯಿಂದ ಬೆಳಕಿನ ಪ್ರತಿಫಲನದ ಬದಲಾವಣೆ ಮತ್ತು ಮೇಲೆ ಹೇಳಿದ ಕ್ರಿಯೆಗಳಿಂದ ಧೂಮಕೇತುವಿನ ಕಾಂತಿ ಹೇಗೆ ಬದಲಾಗುವುದೆಂದು ತಿಳಿಸಬಹುದು. ಅದರೆ ಅನೇಕ ವೇಳೆ ಧೂಮಕೇತುವಿನ ಕಾಂತಿ ನಮ್ಮ ಎಣಿಕೆಯನ್ನು ಸುಳ್ಳಾಗಿಸಿ ಹೊಸದೊಂದು ಸ್ವರೂಪವನ್ನು ನಮಗೆ ತೋರಿಸುತ್ತವೆ. ವಿಶೇಷವಾಗಿ ಮೊದಲ ಬಾರಿಗೆ ಸೂರ್ಯನ ಬಳಿ ಬರುತ್ತಿರುವ ಧೂಮಕೇತುಗಳ ಈ ರೀತಿ ಅನಿಯಮಿತವಾಗಿರುವುದು ಹೆಚ್ಚು. ಈ ಕಾರಣದಿಂದಲೇ 1973ರಲ್ಲಿ ಕಳೆದ ಶತಮಾನದ ಅತ್ಯಾಕರ್ಷಕ ಧೂಮಕೇತು ಅಗಲಿದೆಯೆಂದು ಪ್ರಚಾರ ಪಡೆದ ಕೊಹೊತೆಕ್ ಧೂಮಕೇತು ಸಪ್ಪೆಯಾಯಿತು. ಆದರೆ ವಿe್ಞÁನಿಗಳ ದೃಷ್ಟಿಯಲ್ಲಿ ಇದಕ್ಕೆ ಒಂದು ವಿಶಿಷ್ಟ ಸ್ಥಾನ ಉಂಟು. ಸಾಮಾನ್ಯವಾಗಿ ಒಂದು ಧೂಮಕೇತು ಹಲವು ತಿಂಗಳಿಗಿಂತ ಹೆಚ್ಚಾಗಿ ನೋಡಸಿಗುವುದಿಲ್ಲವಾದ್ದರಿಂದ ಅದರ ಬಗ್ಗೆ ವಿವರವಾದ ಅಧ್ಯಯನಕ್ಕೆ ಅವಕಾಶವೇ ಇರುವುದಿಲ್ಲ. ಅದರ ಕೊಹೊತೆಕ್ ಧೂಮಕೇತು ಒಂದು ವರ್ಷಕ್ಕೂ ಹೆಚ್ಚು ಕಾಲ ವೀಕ್ಷಣೆಗೆ ಸಿಕ್ಕಿತು. ಅಲ್ಲದೆ ಆ ವೇಳೆ ಬಾನ್‍ಕಮ್ಮಟದಿಂದ (ಸ್ಕೈಲ್ಯಾಬ್) ಅದನ್ನು ವೀಕ್ಷಿಸುವ ಅವಕಾಶವೂ ಇದ್ದುದರಿಂದ ಅದರ ಬಗ್ಗೆ ಅನೇಕ ಹೊಸ ಬಗೆಯ ಮಾಹಿತಿಗಳು ದೊರೆತಿವೆ. ಅದರ ಅಧ್ಯಯನವನ್ನು ದೃಶ್ಯರೋಹಿತದಲ್ಲಷ್ಟೇ ಅಲ್ಲದೆ ರೇಡಿಯೋ, ಅತಿರಕ್ತ ಅಲೆಯುದ್ದಗಳಲ್ಲೂ ನಡೆಸಲಾಗಿದೆ. ಧೂಮಕೇತುಗಳಲ್ಲಿ ಮೀಥೈಲ್ ಸಯನೈಡಿನಂಥ ಜಟಿಲ ಸಂಯುಕ್ತಗಳ ಇರುವಿಕೆ ಕೊಹೊತೆಕ್‍ನ ರೇಡಿಯೋ ಅಧ್ಯಯನದಿಂದ ಸಿದ್ಧವಾಯಿತು. ಅದರ ಅತಿರಕ್ತ ಅಧ್ಯಯನದಿಂದ ಸಿಲಿಕೇಟಿನ ಅಸ್ತಿತ್ವ ಬೆಳಕಿಗೆ ಬಂದುದು ಅನಿಲಕೋಶದ ದೂಳಿನ ರಚನೆಯ ಬಗ್ಗೆ ಮೊದಲನೆಯ ನೇರವಾದ ಸುಳಿವಾಗಿದೆ. 1996ರ ಹಯಾಕುಟಾಕೆ ಮತ್ತು 1997ರ ಹೇಲ್‍ಬಾಪ್ ಬರಿಗಣ್ಣಿಗೆ ಕಾಣುವಷ್ಟು ಪ್ರಕಾಶ ಪಡೆದವು; ಘಿ ಕಿರಣಗಳನ್ನು ಗುರುತಿಸಲಾಯಿತು.

ಉಲ್ಕಾವೃಷ್ಟಿ: ಧೂಮಕೇತುವಿನ ಶಿರ ಅತಿ ಚಿಕ್ಕದಾದ್ದರಿಂದ ಅದಕ್ಕೂ ಭೂಮಿಗೂ ನೇರ ಘರ್ಷಣೆಯಾಗುವುದು ಅಪರೂಪ. (1908ರಲ್ಲಿ ಸೈಬೀರಿಯದಲ್ಲಿ ಇಂಥ  ಘರ್ಷಣೆ ನಡೆದು ಒಂದು ಕಾಡು ನಾಶವಾಯಿತು). ಅದರೆ ಪ್ರತಿ ಪರಿಭ್ರಮಣೆಯಲ್ಲೂ ಧೂಮಕೇತುವಿನ ಬಾಲದ ಬಹುಭಾಗ ಹಿಂದೆ ಉಳಿದುಕೊಂಡ ಅವಶೇಷಗಳು ಅ ಧೂಮಕೇತುವಿನ ಕಕ್ಷೆಯಲ್ಲಿ ಹರಡಿಕೊಂಡಿರುತ್ತವೆ. ಭೂಮಿ ತನ್ನ ಪಥದಲ್ಲಿ ಇಂಥ ಅವಶೇಷಗಳ ಮೂಲಕ ಹಾದುಹೋದಾಗ ಉಲ್ಕಾವೃಷ್ಟಿ ಉಂಟಾಗುವುದು.  ಉದಾಹರಣೆಗೆ ಹ್ಯಾಲಿ ಧೂಮಕೇತು ನಮಗೆ 76 ವರ್ಷಗಳ ಅಂತರದಲ್ಲಿ ಮಾತ್ರ ಕಾಣಿಸಿಕೊಂಡರೂ ಪ್ರತಿವರ್ಷದ ಮೇ ತಿಂಗಳ ಮೊದಲ ಭಾಗದಲ್ಲಿ ಭೂಮಿ ಅದರ ಕಕ್ಷೆಯನ್ನು ದಾಟುತ್ತದೆ. ಅಗ ಕಕ್ಷೆಯಲ್ಲಿ ಇರುವ ಹ್ಯಾಲೀ ಧೂಮಕೇತುವಿನ ಅವಶೇಷ ಭೂಮಿಯ ವಾತಾವರಣದೊಡನೆ ಸಂಘರ್ಷಿಸಿ ಅಕ್ವಾರಿಡ್ ಉಲ್ಕಾವೃಷ್ಟಿಯನ್ನು ಉಂಟುಮಾಡುತ್ತದೆ.

ದ್ರವ್ಯಹಾನಿ: ಶಿರದ ವಿಭಜನೆ, ಉಲ್ಕೆಗಳ ಉತ್ಪತ್ತಿ, ಅನಿಲಕೋಶ ಮತ್ತು ಬಾಲಗಳು ಉಂಟಾಗುವುದರ ಮೂಲಕ ವಸ್ತುನಾಶ_ಈ ರೀತಿ ಅನೇಕ ಪ್ರಕಾರಗಳಲ್ಲಿ ಧೂಮಕೇತು ಅಸ್ಥಿರವಾದುದೆಂದು ಇಲ್ಲಿಯವರೆಗೆ ಹೇಳಿರುವ ವಿಷಯಗಳಿಂದ ಸ್ಪಷ್ಟವಾಗಿದೆ. ಪ್ರತಿ ಪರಿಭ್ರಮಣೆಯಲ್ಲಿಯೂ ಸರಾಸರಿ ಸೇಕಡ ಒಂದರಷ್ಟು ದ್ರವ್ಯವನ್ನು ಧೂಮಕೇತು ಕಳೆದುಕೊಳ್ಳುವುದು. ಹೀಗಾಗಿ ಒಂದು ಧೂಮಕೇತು ಸಾಧಾರಣವಾಗಿ ಸಾವಿರಕ್ಕೂ ಹೆಚ್ಚು ಪರಿಭ್ರಮಣೆಗಳ ಕಾಲ ಬಾಳಲಾರದೆಂದು ನಂಬಲಾಗಿದೆ. ಅದರೆ ಅನೇಕ ಧೂಮಕೇತುಗಳಲ್ಲಿ ಸೌರವ್ಯೂಹದ ಅದಿಕಾಲದ ವಸ್ತುಗಳಾದ ಫಾರ್ಮಾಲ್ಡಿಹೈಡಿನಂಥ ಅಣುಗಳು ಇರುವುದರಿಂದಲೂ ಗ್ರಹಗಳಲ್ಲಿ ಕಂಡುಬರುವ ಸಿಲಿಕನ್, ಮೆಗ್ನಿಸಿಯಮ್, ಕಬ್ಬಿಣ ಮುಂತಾದ ಅಣುಗಳು ಧೂಮಕೇತುಗಳಲ್ಲಿ ವಿರಳವಾದ್ದರಿಂದಲೂ ಇಂಥ ಧೂಮಕೇತುಗಳು ಸೌರವ್ಯೂಹದಲ್ಲಿ ಅದಿಕಾಲದಿಂದಲೂ ಇದ್ದವೆಂದು ಸೂಚಿತವಾಗುತ್ತದೆ. ಹಾಗಾದರೆ, ಸ್ವಭಾವತಃ ನಶ್ವರವಾದ ಧೂಮಕೇತುಗಳ ಇಷ್ಟು ಕಾಲ ಹೇಗಿರಬಲ್ಲವು?  ಅಥವಾ ಈಗಲೂ ಹೊಸದಾಗಿ ಸೂರ್ಯನ ಬಳಿ ಬರುತ್ತಿರುವ ಧೂಮಕೇತುಗಳು ಯಾವ ರೀತಿ ಉತ್ಪತ್ತಿಯಾಗುತ್ತಿವೆ? ಎಂಬೆಲ್ಲ ಪ್ರಶ್ನೆಗಳು ಬರುವುದು ಸಹಜ. ಈ ಪ್ರಶ್ನೆಗಳಿಗೆ ಈ ವರೆಗಿನ ಉತ್ತಮ ಸಮಾಧಾನ ಎಂದರೆ ಯಾನ್ ಊರ್ತ್ ಎಂಬ ವಿe್ಞÁನಿ ನೀಡಿರುವುದು.

ಊರ್ತ್‍ನ ವಾದ: ಸೌರವ್ಯೂಹದ ಅಂಚಿನಲ್ಲಿ ಸುಮಾರು ಒಂದು ಲಕ್ಷ ಖಗೋಳಮಾನಗಳ ದೂರದಲ್ಲಿ  ಕೋಟ್ಯಂತರ ಧೂಮಕೇತುಗಳನ್ನು ಧರಿಸಿರುವ ಮೋಡದ ಕವಚವನ್ನು ಸೂರ್ಯನ ಗುರುತ್ವಾಕರ್ಷಣೆ ಹಿಡಿದಿಟ್ಟಿದೆ. ಇಷ್ಟು ದೂರಕ್ಕೆ ಸೂರ್ಯೋಷ್ಣ ತಲಪಲು ಸಾಧ್ಯವಿಲ್ಲದೆ ಇರುವುದರಿಂದ ಸೌರವ್ಯೂಹದ ಆದಿಕಾಲದ ಅಣುಗಳನ್ನು ಒಳಗೊಂಡ ಹಿಮಗಡ್ಡೆಗಳು ಆ ಧೂಮಕೇತುಗಳಲ್ಲಿ ಯಾವ ಮಾರ್ಪಾಡನ್ನೂ ಹೊಂದದೆ ಉಳಿದಿರುತ್ತವೆ. ಕಾಲ ಕ್ರಮೇಣ, ಅಂತರ ನಾಕ್ಷತ್ರಿಕ ಮಾಧ್ಯಮದಲ್ಲಿ ತಮ್ಮ ಸ್ವಾಭಾವಿಕ ಮಂದಗತಿಯಲ್ಲಿ ನಿರಂತರವಾಗಿ ಚಲಿಸುತ್ತಿರುವ ಯಾವುದಾದರೂ ನಕ್ಷತ್ರದ ಗುರುತ್ವಕ್ಷೇತ್ರದ ಎಲ್ಲೆಯೊಳಗೆ ಇಂಥ ಮುಗಿಲು ಬಂದಾಗ ಅದರಿಂದ ಯಾವುದಾದರೊಂದು ಧೂಮಕೇತು ತಪ್ಪಿಸಿಕೊಳ್ಳಬಹುದು. ಹೀಗೆ ತಪ್ಪಿಸಿಕೊಂಡ ಧೂಮಕೇತು ಸೂರ್ಯನ ಕಡೆಗೆ ಬರುವಂತಿದ್ದಲ್ಲಿ ಸೂರ್ಯನ ಮತ್ತು ಸ್ವಲ್ಪಮಟ್ಟಿಗೆ ಭಾರವಾದ ಗುರು, ಶನಿಗಳಂಥ ಹೊರಗ್ರಹಗಳ ಗುರುತ್ವಾಕರ್ಷಣೆಯ ಪ್ರಭಾವದಿಂದ ಅ ಧೂಮಕೇತು ಸೂರ್ಯನ ಕಡೆಗೆ ಧಾವಿಸುವುದು. ಆ ಧೂಮಕೇತುವಿನ ರಾಶಿ ಮತ್ತು ಮುಗಿಲಿನಿಂದ ಹೊರಬಿದ್ದಾಗ ಅದರ ಚಲನೆಯ ದಿಕ್ಕು, ವೇಗ ಮುಂತಾದವನ್ನು ಅವಲಂಬಿಸಿ ಅದರ ಕಕ್ಷೆ ನಿರ್ಧರಿತವಾಗುವುದು.

ಸೂರ್ಯಚಂದ್ರರನ್ನುಳಿದು ಸೌರವ್ಯೂಹದ ಬೇರಿನ್ನಾವ ಅಕಾಶಕಾಯಗಳ ವೀಕ್ಷಣೆಯೂ ಧೂಮಕೇತುಗಳ ವೀಕ್ಷಣೆಯಷ್ಟು ಹಿಂದಿನದಲ್ಲ. ಅದರೂ ಅವುಗಳ ಹುಟ್ಟು. ಸ್ವರೂಪ ಮುಂತಾದವುಗಳ ಮೂಲಭೂತ ಪ್ರಶ್ನೆಗಳಿಗೆ ಇಂದಿಗೂ ಸಮರ್ಪಕ ಉತ್ತರಗಳು ದೊರೆತಿಲ್ಲ. ಹಿಂದೆ ಅಸಾಧ್ಯವಾಗಿದ್ದ ಅನೇಕ ಬಗೆಯ ವೀಕ್ಷಣಾ ಸೌಕರ್ಯ ಇಂದಿನ ವಿe್ಞÁನಿಗಿದೆ. ಭೂಮಿಯಿಂದ ಧೂಮಕೇತುವಿನ ಬಳಿಗೆ ಒಂದು ಆಕಾಶನೌಕೆಯನ್ನು ಕಳುಹಿಸುವುದೂ ಸಾಧ್ಯವಾಗಿದೆ. 1986ರಲ್ಲಿ ಹ್ಯಾಲೀ ಧೂಮಕೇತುವಿನ ಬಾಲದ ಮೂಲಕ ಜಿಯೋತೋ ಎಂಬ ನೌಕೆ ಹಾರಿತು. ವೇಗಾ ಎಂಬ ನೌಕೆಯೂ ಸಮೀಪವಾಗಿ ಹಾದಿತ್ತು. ಆ ಮುಂದೆ ಅನೇಕ ಬಾಹ್ಯಾಕಾಶ ನೌಕೆಗಳು ಹಾರಿ ಧೂಮಕೇತುಗಳನ್ನು ಅಭ್ಯಸಿಸಿವೆ. ಡೀಪ್‍ಸ್ಪೇಸ್ ಎಂಬ ನೌಕೆ ಬೊರೇಲಿ ಎಂಬ ಧೂಮಕೇತುವಿನ ಬಳಿ ಹಾದು ಅದರಿಂದ ವಸ್ತು ಚಿಮ್ಮುವ ಬಗ್ಗೆ ಅಮೂಲ್ಯ ಮಾಹಿತಿ ಒದಗಿಸಿದೆ. ಸ್ಟಾರ್ ಡಸ್ಟ್ ಎಂಬ ಹೆಸರಿನ ನೌಕೆ ವಿಲ್ಡ್-2 (Wiಟಜ-2) ಎಂಬ ಧೂಮಕೇತುವಿನ ಬಾಲವನ್ನು ಹೊಕ್ಕು ದೂಳನ್ನು ಆಯ್ದು ಭೂಮಿಗೆ ತರಲಿದೆ. 2006ರಲ್ಲಿ ಬರುವ ನಿರೀಕ್ಷೆ ಇದೆ. ಇವೆಲ್ಲದರ ಸಹಾಯದಿದ ಈ ಸೃಷ್ಟಿ ವೈಚಿತ್ರ್ಯದ ಬಗ್ಗೆ ನಮ್ಮ ಅರಿವು ಪಕ್ವವಾಗಬಹುದೆಂದು ವಿe್ಞÁನಿಗಳು ನಂಬಿದ್ದಾರೆ.			 (ಸಿ.ಆರ್.ಎಸ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ